ಶಿಲಾತೊಟ್ಟಿ
	ಶಿಲಾಯುಗದ ಜನ ಶವ ಸಂಸ್ಕಾರದ ಉದ್ದೇಶಕ್ಕಾಗಿ ನಿರ್ಮಿಸುತ್ತಿದ್ದ ಶಿಲಾರಚನೆಗಳು. ಇವುಗಳನ್ನು ಶಿಲಾ ಕೋಣೆಗಳು, ಕೋಣೆ ಗೋರಿಗಳು ಎಂದೂ ಕರೆಯುತ್ತಾರೆ. ಪ್ರಪಂಚದ ವಿವಿಧ ಪ್ರದೇಶಗಳ ಇತಿಹಾಸದ ಒಂದೊಂದು ಕಾಲದಲ್ಲಿ ಶವ ಸಂಸ್ಕಾರಕ್ಕಾಗಿ ಶಿಲಾ ತೊಟ್ಟಿ ಅಥವಾ ಶಿಲಾ ಕೋಣೆಗಳನ್ನು ನಿರ್ಮಿಸುವ ವಿಶಿಷ್ಟ ಸಂಪ್ರದಾಯ ಬೆಳೆದು ಬಂತು. ಈ ವಿಧಾನ ಹೇಗೆ ಮತ್ತು ಯಾವಾಗ ಪ್ರಾರಂಭವಾಯಿತೆಂಬುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ. ಪಶ್ಚಿಮ ಯುರೋಪಿನ ಕೆಲವು ಪ್ರದೇಶಗಳಲ್ಲಿ ಮತ್ತು ಪಶ್ಚಿಮ ಮೆಡಿಟರೇನಿಯನ್ ಪ್ರದೇಶದಲ್ಲಿ, ನೂತನ ಶಿಲಾಯುಗದ ಹಾಗೂ ಕಂಚಿನ ಯುಗದ ಆಫ್ರಿಕದ ಉತ್ತರಭಾಗ, ಪ್ಯಾಲಸ್ತೀನ್, ಸಿರಿಯ, ಇರಾನಿನ ಉತ್ತರಭಾಗ, ಬಲೂಚಿಸ್ತಾನಗಳಲ್ಲಿ ತಾಮ್ರ ಮತ್ತು ಕಬ್ಬಿಣ ಯುಗದ ಶಿಲಾ ತೊಟ್ಟಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿವೆ. ಇವುಗಳಲ್ಲದೆ ಆಗ್ನೇಯ ಏಷ್ಯದ ಕೆಲವು ಭಾಗಗಳಲ್ಲಿ, ಜಪಾನಿನಲ್ಲಿ ಇತ್ತೀಚಿನವರೆಗೂ ಈ ಪದ್ಧತಿ ಜಾರಿಯಲ್ಲಿತ್ತು. ಕೆಲವು ಬುಡಕಟ್ಟುಗಳಲ್ಲಿ ಇಂದಿಗೂ ಈ ಸ್ಮಾರಕ ಶಿಲಾತೊಟ್ಟಿ ರಚಿಸುವ ವಾಡಿಕೆ ಕಂಡುಬರುತ್ತದೆ. ಭಾರತದ ಈಶಾನ್ಯಭಾಗದ ಖಾಸಿ, ಒರಿಸ್ಸದ ಬೊಂಡ ಮತ್ತು ಕೇರಳದ ಕುರಂಬರಲ್ಲಿ ಇಂಥ ಪದ್ಧತಿ ಕಂಡುಬರುತ್ತದೆ.
ಸಾಮಾನ್ಯವಾಗಿ ದಕ್ಷಿಣಭಾರತದ ಅನೇಕ ಕಡೆಗಳಲ್ಲಿ ನೂರಾರು ಶಿಲಾತೊಟ್ಟಿಗಳುಳ್ಳ ಸಾವಿರಾರು ಸಮಾಧಿನೆಲೆಗಳು ಕಂಡುಬಂದಿದ್ದರೂ ನಿಧಾನವಾಗಿ ಇವು ನಾಶಹೊಂದುತ್ತಾ ಬಂದಿವೆ. ಅನೇಕ ಕಡೆಗಳಲ್ಲಿ ನಡೆದಿರುವ ವೈಜ್ಞಾನಿಕ ಉತ್ಖನನಗಳಿಂದ ಈ ಪದ್ಧತಿ ನೂತನ ಶಿಲಾಯುಗದ ಕೊನೆಯ ಭಾಗದಲ್ಲಿ ಕಬ್ಬಿಣದ ಉಪಯೋಗದೊಡನೆ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ. ದಕ್ಷಿಣಭಾರತದ ಜನರಲ್ಲಿ ಶಿಲಾತೊಟ್ಟಿ ರಚಿಸುವ ಸಂಪ್ರದಾಯ ಒಂದು ವಿಶಿಷ್ಟಕಲೆಯಾಗಿ ಕಂಡುಬರುತ್ತದೆ. ಇದನ್ನು ಬೃಹತ್ ಶಿಲಾಸಂಸ್ಕøತಿ ಎಂದು ಕರೆಯುತ್ತಾರೆ.

	ದಕ್ಷಿಣ ಭಾರತದ ಅನೇಕ ಹಳ್ಳಿಗಳಲ್ಲಿ ಈ ಶಿಲಾ ತೊಟ್ಟಿಗಳನ್ನು ಪಾಂಡವರ ಮೊರಿಯರ ಮನೆ, ಮುನಿವಾಸ ಗುಹೆಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಹಲವಾರು ಬಗೆಗಳಿವೆ. ಕೆಲವು ಶಿಲಾತೊಟ್ಟಿಗಳನ್ನು ಹಾಸು ಬಂಡೆಗಳನ್ನು ಕೊರೆದು ನಿರ್ಮಿಸಿದ್ದರೆ, ಇನ್ನೂ ಕೆಲವು ತೊಟ್ಟಿಗಳನ್ನು ಗ್ರಾನೈಟ್ ಕಲ್ಲುಚಪ್ಪಡಿಗಳನ್ನಾಗಿ ಮಾಡಿ ಅವುಗಳನ್ನು ಹದಮಾಡಿಕೊಂಡು ಭೂಮಿಯೊಳಗೆ ಗುಂಡಿತೋಡಿ ಅಥವಾ ಭೂಮಿಯ ಮೇಲ್ಭಾಗದಲ್ಲಿ ಶವಸಂಸ್ಕಾರಕ್ಕಾಗಿಯೇ ನಿರ್ಮಿಸಲಾಗಿರುತ್ತದೆ. ಇವು ಸಾಮಾನ್ಯವಾಗಿ ಒಂದರಿಂದ ಮೂರು ಚಮೀ ಚೌಕಾಕಾರ ಅಥವಾ ಉದ್ದವಾಗಿರುತ್ತವೆ. ಒಂದೊಂದು ಬಗೆಯನ್ನು ಒಂದೊಂದು ಹೆಸರಿನಿಂದ ಗುರುತಿಸಲಾಗಿದೆ. ಇವುಗಳ ರಚನೆ ಭಿನ್ನವಾಗಿದ್ದು, ಕಲಾತ್ಮಕವಾಗಿರುತ್ತವೆ.

	1. ಬಂಡೆಗಳನ್ನು ಕೊರೆದು ನಿರ್ಮಿಸಿದ ಗುಹೆಗಳು (ರಾಕ್ ಕಟ್ ಕೇವ್ಸ್): ಬಂಡೆಗಳನ್ನು ಕೊರೆದು ನಿರ್ಮಿಸಿದ ಈ ಶಿಲಾ ತೊಟ್ಟಿಗಳು ವಿಶಿಷ್ಟವಾಗಿರುತ್ತವೆ. ಇವು ಹೆಚ್ಚಾಗಿ ಕೇರಳದ ಕೊಚ್ಚಿನ್ ಮತ್ತು ಮಲಬಾರ್ ಭಾಗಗಳಲ್ಲಿ ಕಂಡುಬರುತ್ತವೆ. ಇವನ್ನು ಒರಟಾದ ದೊಡ್ಡ ದೊಡ್ಡ ಕಡುಶಿಲೆಗಳನ್ನು, ಗ್ರಾನೈಟ್ ಬಂಡೆಗಳನ್ನು ಅಥವಾ ಮೃದುವಾದ ಜಂಬಿಟ್ಟಿಗೆಯನ್ನು ಕೊರೆದು ನಿರ್ಮಿಸಲಾಗಿರುತ್ತದೆ. ಬೃಹತ್ ಶಿಲಾಯುಗದ ಜನರ ಸಮಾಧಿಗಳಿಗಾಗಿಯೇ ಒಂದು ರೀತಿ ತೆರೆದ ಬಾವಿಗಳಂತೆ ಚೌಕಾಕಾರವಾಗಿ ಕತ್ತರಿಸಿ ಕೆಳಗಿಳಿಯಲು ಹಂತಗಳನ್ನು ನಿರ್ಮಿಸಿ, ಒಳ ಹೋಗಲು ಪ್ರವೇಶದ್ವಾರಗಳನ್ನು ಮಾಡಿ ಒಳಭಾಗದಲ್ಲಿ ಕುಳಿತುಕೊಳ್ಳಲು ಎರಡು ಅಥವಾ ಮೂರು ಆಸನಗಳನ್ನೂ ಮಾಡಲಾಗಿದೆ. ಇನ್ನೂ ಕೆಲವು ತೊಟ್ಟಿಗಳ ಮಧ್ಯೆ ಒಂದು ಕಂಬವನ್ನು ಬಿಟ್ಟಿರುವುದು ಕಂಡು ಬರುತ್ತದೆ. ಇಂತಹ ಶಿಲಾತೊಟ್ಟಿಗಳು ಕೇರಳದ ಚೊವ್ವನಾರ್, ಕಕ್ಕಡ್, ಪೋರ್ಕಲಾಮ್, ಕಟ್ಟಕಮ್‍ಪಾಲ್ ಮತ್ತು ಉಳಿದ ಕಡೆಗಳಲ್ಲಿ ಕಂಡುಬರುತ್ತವೆ.

	2. ಡಾಲ್ಮನಾಯ್ಡ್ ಸಿಸ್ಟ್: ಈ ವಿಧದ ಶಿಲಾತೊಟ್ಟಿಗಳು ದೊಡ್ಡ ಗ್ರಾನೈಟ್ ಬಂಡೆಗಳಿಂದ ಕತ್ತರಿಸಿ ತೆಗೆದು ಎರಡು ಮುಖಗಳಲ್ಲಿ ಕಲ್ಲುಮುಳ್ಳನ್ನು ತೆಗೆದಿರುವ ಆರ್ತೋಸ್ಟಾಟ್‍ಗಳನ್ನು ಬಳಸಿ ಚೌಕಾಕಾರ, ಆಯತಾಕಾರದ ಪೆಟ್ಟಿಗೆ ರೀತಿಯಲ್ಲಿ ನಿರ್ಮಿತವಾಗಿರುತ್ತವೆ. ಒಂದು ಭಾಗಕ್ಕೆ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಆರ್ತೋಸ್ಟಾಟ್‍ಗಳನ್ನು ಬಳಸಿ ನಿರ್ಮಿಸಿದ ತೊಟ್ಟಿಯ ಕೆಳಭಾಗದಲ್ಲಿ ಕೆಲವು ಸಂದರ್ಭಗಳಲ್ಲಿ ಅದೇ ಕಲ್ಲು ಚಪ್ಪಡಿ ಹಾಸಿ ಶವಗಳನ್ನು ಮಲಗಿಸಲು ಅಣಿ ಮಾಡಲಾಗಿದೆ. ಇಂತಹ ಶಿಲಾ ತೊಟ್ಟಿಗಳ ಮೇಲ್ಭಾಗವನ್ನು ಸಹ ಒಂದು ಅಥವಾ ಒಂದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮೇಲ್ ಹಾಸುಗಳನ್ನು (ಕ್ಯಾಪ್ ಸ್ಟೋನ್) ಒಂದರಮೇಲೆ ಮತ್ತೊಂದು ಕುಳಿತುಕೊಳ್ಳುವಂತೆ ಹಾಗೂ ತೊಟ್ಟಿಯ ನಾಲ್ಕುಚಪ್ಪಡಿಗಳ ಮೇಲೂ ಸರಿಯಾಗಿ ಕುಳಿತುಕೊಳ್ಳುವಂತಹ ಅಳತೆಯಲ್ಲೇ ರೂಪಿಸಲಾಗಿದೆ. ಉತ್ಖನನಕ್ಕೆ ಮೊದಲೇ ಇಂತಹ ಪೆಟ್ಟಿಗೆಯಾಕಾರದ ಶಿಲಾತೊಟ್ಟಿಗಳನ್ನು ಗುರುತಿಸಿಕೊಳ್ಳಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಕಲ್ಲುಮುಳ್ಳು ತೆಗೆದು ನಯಗೊಳಿಸದೆ ಇರುವಂತಹ ಕಲ್ಲನ್ನೂ ಬಳಸಲಾಗಿದೆ. ಇಂಥ ಶಿಲಾತೊಟ್ಟಿಯನ್ನು ಗಡಿಗೆ ಸಮಾಧಿಗಳಿಗೆ ಅಥವಾ ಅನೇಕ ಕಾಲುಗಳುಳ್ಳ ಮಣ್ಣಿನಿಂದ ಮಾಡಿದ ತೊಟ್ಟಿಲು ರೀತಿಯ ದೊಡ್ಡ ಸಾರ್ಕೋಫೋಗಸ್ ಸಮಾಧಿಗಳಿಗೆ ಬಳಸಲಾಗಿದೆ. ಇಂಥ ಶಿಲಾತೊಟ್ಟಿಗಳ ಹೊರಭಾಗದ ಸುತ್ತಲೂ ಚಪ್ಪಡಿಗಳನ್ನು ಮಾಡುವಾಗ ಮೂಡಿಬರುವ ಚಕ್ಕೆಗಳನ್ನು ಜೋಡಿಸಲಾಗಿದೆ. ಈ ರೀತಿಯ ಶಿಲಾ ತೊಟ್ಟಿಗಳು ದಕ್ಷಿಣಭಾರತದ ಅನೇಕ ಭಾಗಗಳಲ್ಲಿ ಕಂಡುಬರುತ್ತವೆ.

	3. ಸ್ಲಾಬ್ ಸಿಸ್ಟ್: ಈ ವಿಧಾನದ ಶಿಲಾತೊಟ್ಟಿಗಳ ನಿರ್ಮಾಣ ಒಂದು ಕಲಾತ್ಮಕ ಕೆಲಸವೆಂದು ಹೇಳಬಹುದು. ಕ್ರಿ.ಪೂ. 3500-3000 ವರ್ಷಗಳ ಹಿಂದೆ ಗ್ರಾನೈಟ್ ಬಂಡೆಗಳನ್ನು ಕತ್ತರಿಸಿ ದೊಡ್ಡ ದೊಡ್ಡ ಚಪ್ಪಡಿಗಳನ್ನು ಮಾಡಿಕೊಂಡು ಗಾರೆಯಂತಹ ಯಾವ ವಸ್ತುಗಳನ್ನೂ ಬಳಸದೆ ಗಡಿಯಾರದ ಮುಳ್ಳು ಚಲಿಸುವಂತೆ ಎಡದಿಂದ ಬಲಕ್ಕೆ ಸ್ವಸ್ತಿಕ್ ಮಾದರಿಯಲ್ಲಿ ಒಂದು ಕಲ್ಲು ಚಪ್ಪಡಿ ಮತ್ತೊಂದು ಚಪ್ಪಡಿ ಕಳಚಿಬೀಳದಂತೆ ಆಧಾರವಾಗಿ ಇರುವ ಹಾಗೆ ಇವು ರಚಿತವಾಗಿರುತ್ತವೆ.

ಸಾಮಾನ್ಯವಾಗಿ ಇಂಥ ಕೋಣೆಗಳನ್ನು ನಿರ್ಮಿಸುವಾಗ ಪೂರ್ವ ಭಾಗದ ಆರ್ತೋಸ್ಟಾಟ್‍ನಲ್ಲಿ ಒಂದು ವೃತ್ತಾಕಾರದ ದೊಡ್ಡ ಕಿಂಡಿಯನ್ನು (ಪೋರ್ಟ್ ಹೋಲ್) ಇಡಲಾಗುತ್ತದೆ. ಕೆಲವು ಸಾರಿ ಕೋಣೆಯ ಹೊರಭಾಗದಲ್ಲಿ ದಾರಿ (ಪ್ಯಾಸೇಜ್) ಇರುತ್ತದೆ. ಇವುಗಳನ್ನು ಕಿಂಡಿ ಕೋಣೆಗೋರಿಗಳು ಎಂದೂ ಕರೆಯಬಹುದಾಗಿದ್ದು, ಇವು ದಕ್ಷಿಣ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಪಶ್ಚಿಮ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

	ಭೂಮಿಯೊಳಗೆ ಗುಂಡಿಯನ್ನು ತೋಡಿ ಕೆಳಗೆ ಒಂದು ಚಪ್ಪಡಿ (ಬಾಟಮ್ ಸ್ಲಾಬ್)ಯನ್ನು ಹಾಸಿ ಗುಂಡಿಯೊಳಗೆ ಹುದುಗಿ ಹೋಗುವಂತೆ ಆರ್ತೋಸ್ಟಾಟ್‍ಗಳನ್ನು ನಿರ್ಮಿಸುವುದು, ಅರ್ಧಭಾಗ ಹೊರಗೆ ಆರ್ತೋಸ್ಟಾಟ್‍ಗಳು ಕಾಣುವಂತೆ ಶಿಲಾತೊಟ್ಟಿಯನ್ನು ನಿರ್ಮಿಸುವುದು ಮತ್ತು ಭೂಮಿಯ ಮೇಲೆ ಶಿಲಾತೊಟ್ಟಿಯನ್ನು ನಿರ್ಮಿಸುವುದು ಹೀಗೆ ಇಂಥ ತೊಟ್ಟಿಗಳಲ್ಲಿ ಮೂರು ವಿಧಾನಗಳಿವೆ. ಈ ಎಲ್ಲಾ ವಿಧಾನಗಳ ಶಿಲಾಕೋಣೆಯಲ್ಲಿಯೂ ಒಂದು ಆರ್ತೋಸ್ಟಾಟ್‍ನಲ್ಲಿ ಒಂದು ಕಿಂಡಿಯನ್ನು ಮಾಡಿರುವುದಲ್ಲದೆ ಮೇಲ್ಭಾಗದಲ್ಲಿ ದೊಡ್ಡ ಮೇಲ್ಗಲ್ಲನ್ನು ಹಾಸಿ ಸರಿಯಾಗಿ ಮುಚ್ಚಲಾಗಿರುತ್ತದೆ. ಭೂಮಿಯ ಮೇಲೆ ನಿರ್ಮಿಸುವ ಇಂತಹ ಶಿಲಾಕೋಣೆಗಳನ್ನು ಎರಡನೆಯ ಹಂತದ ಸಮಾಧಿಗಳನ್ನಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಪ್ರಾಯಃ ಹೊರಗೆ ಇಟ್ಟ ಶವದ ಅಸ್ಥಿಗಳನ್ನು ಸಂಗ್ರಹಿಸಿ ಮಡಕೆಗಳಲ್ಲಿಟ್ಟು ಸಮಾಧಿ ಮಾಡುವ ವಿಧಾನ ಪ್ರಚಲಿತವಾಗಿತ್ತೆಂದು ತೋರುತ್ತದೆ.

	4. ಪಿಟ್ ಬರಿಯಲ್: ಭೂಮಿಯೊಳಗೆ ಆಳವಾಗಿ ಹುದುಗಿಸಿ ಮಾಡಿರುವ ಶಿಲಾತೊಟ್ಟಿಗಳು ಹೊರಗಿನಿಂದ ಕಾಣಿಸದಿದ್ದರೂ ಕೆಲವು ಸಂದರ್ಭಗಳಲ್ಲಿ ಮೇಲ್ಗಲ್ಲುಗಳು ಮಾತ್ರ ಕಾಣಿಸುತ್ತಿರುತ್ತವೆ. ಇನ್ನೂ ಕೆಲವು ಶಿಲಾ ಕೋಣೆಗಳ ಸುತ್ತಲೂ ವೃತ್ತಾಕಾರವಾಗಿ ಮಧ್ಯಗಾತ್ರದ ಉಂಡೆ ಗಲ್ಲನ್ನು ಜೋಡಿಸಿ ವೃತ್ತಾಕಾರದ ಕಲ್ಲು ಸಮಾಧಿಯನ್ನಾಗಿ ಮಾಡಲಾಗಿರು ತ್ತದೆ. ಇದನ್ನು ಪಿಟ್ ಬರಿಯಲ್ ಎಂದು ಕರೆಯಲಾಗುತ್ತದೆ.

	5. ಸ್ಲಾಬ್ ಸಿಸ್ಟ್ ವಿತ್ ಕೇರನ್ ಸರ್ಕಲ್. ಕೆಲವು ಕಡೆ ಶಿಲಾತೊಟ್ಟಿ ಗಳ ಮೇಲ್ಭಾಗದಲ್ಲಿ ಮೊಟ್ಟೆಯಾಕಾರದಲ್ಲಿ ಜಲ್ಲಿಕಲ್ಲು ಮತ್ತು ಕಲ್ಲು ಚಕ್ಕೆಗಳನ್ನು ಬಳಸಿ ಮಧ್ಯಭಾಗದಲ್ಲಿ ಉಬ್ಬಿದಹಾಗೆ ಕಾಣುವಂತೆ ನಿರ್ಮಿಸಲಾಗಿರುತ್ತದೆ. ಇದನ್ನು ಕೇರನ್ ಸರ್ಕಲ್ ಹೊಂದಿರುವ ಶಿಲಾತೊಟ್ಟಿ ಎಂದು ಕರೆಯಲಾಗಿದೆ. ಕೆಲವು ಶಿಲಾತೊಟ್ಟಿಗಳಲ್ಲಿ ಒಂದ ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮನುಷ್ಯರ ಅಸ್ಥಿಗಳು ದೊರಕಿರುವುದುಂಟು.

	ವ್ಯಕ್ತಿಯ ಮರಣಾನಂತರ ಅವನು ಬಳಸಿದ ವಿವಿಧ ರೀತಿಯ ಕಬ್ಬಿಣದ ಆಯುಧಗಳು, ಕೆಲವು ಉಪಕರಣಗಳು, ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದ ಸುಟ್ಟಮಣ್ಣಿನ ಪಾತ್ರೆಗಳು, ಮುಚ್ಚಳಗಳು, ರಾಗಿ, ಬತ್ತ ಮುಂತಾದ ಧಾನ್ಯಗಳು, ಕಲ್ಲು, ದಂತ ಮತ್ತು ಸುಟ್ಟಮಣ್ಣಿನ ಆಭರಣಗಳನ್ನು ಶಿಲಾ ಕೋಣೆಯೊಳಗೆ ಇಡಲಾಗುತ್ತಿತ್ತು. ಇವುಗಳನ್ನು ಬರಿಯಲ್ ಗೂಡ್ಸ್ ಎಂದು ಕರೆಯಲಾಗುತ್ತದೆ.

ಬ್ರಹ್ಮಗಿರಿಯ ಶಿಲಾಕೋಣೆಗಳಲ್ಲಿನ ಮಾನವನ ಅಸ್ಥಿಗಳ ಅಧ್ಯಯನದಿಂದ ಆ ಶಿಲಾತೊಟ್ಟಿಗಳನ್ನು ನಿರ್ಮಿಸಿದ ಜನರು ಎರಡು ಬೇರೆಬೇರೆಯ ಬುಡಕಟ್ಟಿಗೆ ಸೇರಿದವರೆಂದು ತಿಳಿದು ಬಂದಿದ್ದು ಸ್ಥಳೀಯ ಪ್ರೋಟೋ ಆಸ್ಟ್ರಲಾಯಿಡ್ ಮತ್ತು ಬಹುಶಃ ಹೊರಗಿನಿಂದ ಬಂದ ಸಿಂಧಿಯಾ-ಇರಾನಿನ ಜನರನ್ನು ಹೋಲುವರೆಂದು ಹೇಳಲಾಗಿದ್ದರೂ ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ.			
					
		(ಎ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ